ಹೊತ್ತಿತೋ ಹೊತ್ತಿತು
ಸಿದ್ಧಯ್ಯ ಪುರಾಣಿಕ್
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ
ಕನ್ನಡದ ನನ್ನಿಗರ ಕಣ್ಣ ಬರ ಹಿಂಗೆ
ಕನ್ನಡದ ಮಣ್ಣು ಸಹ ಹೊರೆಯೇರಿ ಹೊಂಗೆ
ದಡಸೂಸಿ ಹರಿದಾಡೆ ಆ ಕೃಷ್ಣ ತುಂಗೆ
ಮೋದಾಂತರಂಗೆ, ಶುಭ ಮಂಗಲಾಂಗೆ
ಬೆಲಕಿನಲೆ ಜಳಕವನು ಮಡೆ ಭೂಗಗನ
ತಮ ಜಾರೆ ಮಗಮಗಿಸೆ ಮಲಯಮಧುಪವನ
ನಭಕೇರೆ ಕನ್ನಡದ ಮಂಗಳ ಧ್ವಾನ
ಕನ್ನಡದ ಪ್ರಾಣ ಕನ್ನಡ ನಿಧಾನ
ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ
ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ